Brahma Kalasha
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಕುಡುಪು ಶ್ರೀ ಅನಂತ ಪದ್ಮನಾಭ ಸ್ವಾಮಿಗೆ ವಾರ್ಷಿಕ ಜಾತ್ರ ಮಹೋತ್ಸವ. ಮಾರ್ಗಶಿರ ಶುದ್ಧ ಪಾಡ್ಯದಿಂದ ಧನುರ್ಮಾಸ ಪರ್ಯಂತ 'ಚಂಪಾ ಷಷ್ಟಿ','ಕಿರು ಷಷ್ಟಿ',' ವಾರ್ಷಿಕ ಮಹೋತ್ಸವ. ಹೀಗೆ ಉತ್ಸವಗಳ ಸಾಲು ಸಾಲು. ದಕ್ಷಿಣಾಯನದ ಕೊನೆಯ ತಿಂಗಳು ಉತ್ತರಾಯಣ ಪ್ರಾರಂಭವು ಆಗಿರುವ ಧನುರ್ಮಾಸವು ದೇವಾನು ದೇವತೆಗಳಿಗೆ ರಾತ್ರಿ ಸಮಾಪ್ತಿಯೊಂದಿಗೆ, ಹಗಲು ಪ್ರಾರಂಭ ಗೊಳ್ಳುವುದು ಎಂಬುದು ನಂಬಿಕೆ. ಹೆಚ್ಚಿನ ದೇವಾಲಯಗಳಲ್ಲಿ 'ಧನು ಪೂಜೆ' ಎಂದು ಸೂರ್ಯೋದಯಕ್ಕೆ ಮೊದಲೇ ಪೂಜಾ ಕೈಂಕರ್ಯಗಳು ನಡೆಯುತ್ತದೆ. ದೇವತಾರಾಧನೆಗೆ ಇದು ಪ್ರಶಸ್ತ ಕಾಲ. ಶ್ರೀ ಹರಿಗೆ ಪ್ರಿಯವಾದ 'ಶ್ರೀ ವೈಕುಂಠ ಏಕಾದಶಿ', 'ಮುಕ್ಕೋಟಿ ದ್ವಾದಶಿ'ಯ ನಂತರ ಬರುವ ಧನುರ್ಮಾಸ ಚತುರ್ದಶಿಯಿಂದ ಶ್ರೀ ಸ್ವಾಮಿಗೆ ನಾಲ್ಕು ದಿನಗಳ ವಾರ್ಷಿಕ ಜಾತ್ರ ಮಹೋತ್ಸವ. *ಪ್ರಥಮ ದಿನ:- ಚತುರ್ದಶಿ* ಈ ದಿನ ಸಂಜೆ 7'ಕ್ಕೆ ಪ್ರಾರ್ಥನೆ ನೆರವೇರಿಸಿ ಸದ್ಭಕ್ತರೊಡಗೂಡಿಸಿ ಶ್ರೀ ದೇವರ ಸಮ್ಮುಖದಲ್ಲಿ ಗ್ರಾಮಕ್ಕೆ, ಭಕ್ತಾದಿಗಳಿಗೆ ಬರುವ ಸರ್ವ ಕಷ್ಟ-ನಷ್ಟ ಅರಿಷ್ಟಾದಿಗಳನ್ನು ದೂರೀಕರಿಸಿ ಬೇಡಿ ಬಂದ ಭಕ್ತರನ್ನು ಅನುಗ್ರಹಿಸಿ ನಾಲ್ಕು ದಿನಗಳಲ್ಲಿ ನಡೆಯುವ ವಾರ್ಷಿಕ ಜಾತ್ರ ಮಹೋತ್ಸವಕ್ಕೆ ಲೋಪ ದೋಷಗಳು ಬರದ ರೀತಿಯಲ್ಲಿ ಸುಸೂತ್ರವಾಗಿ ನಡೆಸಿಕೊಟ್ಟು ಕ್ಷೇತ್ರದ ಕೀರ್ತಿ ಖ್ಯಾತಿಯನ್ನು ಬೆಳಗಿಸುವಂತೆ ಸಂಪ್ರಾರ್ಥಿಸ...