Brahma Kalasha
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಕುಡುಪು ಶ್ರೀ ಅನಂತ ಪದ್ಮನಾಭ ಸ್ವಾಮಿಗೆ ವಾರ್ಷಿಕ ಜಾತ್ರ ಮಹೋತ್ಸವ. ಮಾರ್ಗಶಿರ ಶುದ್ಧ ಪಾಡ್ಯದಿಂದ ಧನುರ್ಮಾಸ ಪರ್ಯಂತ 'ಚಂಪಾ ಷಷ್ಟಿ','ಕಿರು ಷಷ್ಟಿ',' ವಾರ್ಷಿಕ ಮಹೋತ್ಸವ. ಹೀಗೆ ಉತ್ಸವಗಳ ಸಾಲು ಸಾಲು. ದಕ್ಷಿಣಾಯನದ ಕೊನೆಯ ತಿಂಗಳು ಉತ್ತರಾಯಣ ಪ್ರಾರಂಭವು ಆಗಿರುವ ಧನುರ್ಮಾಸವು ದೇವಾನು ದೇವತೆಗಳಿಗೆ ರಾತ್ರಿ ಸಮಾಪ್ತಿಯೊಂದಿಗೆ, ಹಗಲು ಪ್ರಾರಂಭ ಗೊಳ್ಳುವುದು ಎಂಬುದು ನಂಬಿಕೆ. ಹೆಚ್ಚಿನ ದೇವಾಲಯಗಳಲ್ಲಿ 'ಧನು ಪೂಜೆ' ಎಂದು ಸೂರ್ಯೋದಯಕ್ಕೆ ಮೊದಲೇ ಪೂಜಾ ಕೈಂಕರ್ಯಗಳು ನಡೆಯುತ್ತದೆ. ದೇವತಾರಾಧನೆಗೆ ಇದು ಪ್ರಶಸ್ತ ಕಾಲ. ಶ್ರೀ ಹರಿಗೆ ಪ್ರಿಯವಾದ 'ಶ್ರೀ ವೈಕುಂಠ ಏಕಾದಶಿ', 'ಮುಕ್ಕೋಟಿ ದ್ವಾದಶಿ'ಯ ನಂತರ ಬರುವ ಧನುರ್ಮಾಸ ಚತುರ್ದಶಿಯಿಂದ ಶ್ರೀ ಸ್ವಾಮಿಗೆ ನಾಲ್ಕು ದಿನಗಳ ವಾರ್ಷಿಕ ಜಾತ್ರ ಮಹೋತ್ಸವ.
*ಪ್ರಥಮ ದಿನ:- ಚತುರ್ದಶಿ*
ಈ ದಿನ ಸಂಜೆ 7'ಕ್ಕೆ ಪ್ರಾರ್ಥನೆ ನೆರವೇರಿಸಿ ಸದ್ಭಕ್ತರೊಡಗೂಡಿಸಿ ಶ್ರೀ ದೇವರ ಸಮ್ಮುಖದಲ್ಲಿ ಗ್ರಾಮಕ್ಕೆ, ಭಕ್ತಾದಿಗಳಿಗೆ ಬರುವ ಸರ್ವ ಕಷ್ಟ-ನಷ್ಟ ಅರಿಷ್ಟಾದಿಗಳನ್ನು ದೂರೀಕರಿಸಿ ಬೇಡಿ ಬಂದ ಭಕ್ತರನ್ನು ಅನುಗ್ರಹಿಸಿ ನಾಲ್ಕು ದಿನಗಳಲ್ಲಿ ನಡೆಯುವ ವಾರ್ಷಿಕ ಜಾತ್ರ ಮಹೋತ್ಸವಕ್ಕೆ ಲೋಪ ದೋಷಗಳು ಬರದ ರೀತಿಯಲ್ಲಿ ಸುಸೂತ್ರವಾಗಿ ನಡೆಸಿಕೊಟ್ಟು ಕ್ಷೇತ್ರದ ಕೀರ್ತಿ ಖ್ಯಾತಿಯನ್ನು ಬೆಳಗಿಸುವಂತೆ ಸಂಪ್ರಾರ್ಥಿಸುತ್ತಾರೆ.
ನಂತರ ಅನಂತ ದೇವರ ಬಳಿ ಹೊರಟು ಧ್ವಜ ಸ್ತಂಭದ ಬಳಿ ಬಂದು ಧ್ವಜಾರೋಹಣ. ಧ್ವಜ ಸ್ತಂಭವನ್ನು ಫಲ ಪುಷ್ಪಗಳಿಂದ ಅಲಂಕರಿಸಿ ಗರುಡ ಪೂಜೆ ನಡೆಯುತ್ತದೆ. ನಂತರ ಜೋಡು ದೇವರ ಬಯನ ಬಲಿ ಉತ್ಸವ. ನಂತರ ನಿತ್ಯ ಮಹಾಪೂಜೆಯಾಗಿ, ನಿತ್ಯ ಬಲಿ, ಭೂತ ಬಲಿ. ಹೀಗೆ ಒಂದಾದ ಒಂದರಂತೆ ನಾಲ್ಕು ಬಾರಿ ಗರ್ಭಗುಡಿಯಿಂದ ಹೊರಬಂದು ಕೊನೆಗೆ ಮಂದಸ್ಮಿತ ಸಾಲು ಸಾಲು ದೀಪಗಳ ಬೆಳಕಿನಲ್ಲಿ ನಡೆಯುವ ದೀಪ ಬಲಿಯ ಸೊಬಗನ್ನು ನೋಡಲು ಕಣ್ಗಳಿಗೆ ಹಬ್ಬವೇ ಸರಿ.
*ದ್ವಿತೀಯ ದಿನ:- ಹುಣ್ಣಿಮೆ*
ಮಾನಸ ಪೂಜೆ. ಈ ದಿನ ಅಣ್ಣ ತಮ್ಮಂದಿರಾದ ಶ್ರೀ ಅನಂತ ಪದ್ಮನಾಭ ದೇವರುಗಳು ತಂತ್ರ ಮುಖೇನ ಬಲಿ ಹೊರಟು ಜೋಡು ದೇವರ ಉತ್ಸವ. ಕಟ್ಟೆ ಪೂಜೆ, ಕೆರೆ ಉತ್ಸವ. ಪಾಲಕಿ ಬಲಿಯಾಗಿ ಮಾನಸ ಪೂಜೆಯಾಗಿ ಕವಾಟ ಬಂಧನ. ಮರುದಿನ ಬೆಳಿಗ್ಗೆ ತಂತ್ರಿಗಳಿಂದ ಕವಾಟೋದ್ಘಾಟನೆ.(ತುಳುವರ ಪ್ರಕಾರ ಗುಂಡದ ಬಾಕಿಲ್ ಜಪ್ಪುನಿ)
ದ.ಕ ಜಿಲ್ಲೆಯ ಹೆಚ್ಚಿನ ದೇವಾಲಯಗಳಲ್ಲಿ ಬ್ರಹ್ಮ ರಥೋತ್ಸವವು ನಡೆದು ಶಯನ ಪೂಜೆ ನಡೆಸಿ ಕವಾಟ ಬಂಧನ. ಮರುದಿನ ಅಭಿಷೇಕ ಪೂಜೆ ನಡೆದು ಕವಾಟೋದ್ಘಾಟನೆ. ಇಲ್ಲಿ ಮಾತ್ರ ಶ್ರೀ ಸ್ವಾಮಿಗೆ ವಿಶೇಷ ಮಡಿಯಲ್ಲಿ ಮಾನಸ ಪೂಜೆಯು ನಡೆದು, ಮರುದಿನ
ಪಂಚಗವ್ಯ ಪ್ರೋಕ್ಷಣೆಯೊಂದಿಗೆ ಕವಾಟೋದ್ಘಾಟನೆ ನೆರವೇರುತ್ತದೆ.
*ಮಾನಸ ಪೂಜೆ*(ಶ್ವೇತ ಬಣ್ಣ-ವಿಶಾಲವಾದ)
ಶ್ರೀ ಮಹಾವಿಷ್ಣು ಅಲಂಕಾರ ಪ್ರಿಯ. ಪಂಚಭೂತಗಳಲ್ಲಿ ಮಹಾವಿಷ್ಣು ಆಕಾಶಕ್ಕೆ ಅಧಿಪತಿಯಾದ ಶ್ರೀ ಹರಿಗೆ ಶಬ್ದಗಳಿಂದ ಸ್ತುತಿಸುತ್ತಾ ಪೂಜೆ.
ಮೇಲಿನ ಹೆಸರೇ ಸೂಚಿಸುವಂತೆ ವಿಶಾಲವಾದ ಬಾನಿನಲ್ಲಿ ಅರಳಿದ ಪೂರ್ಣ ಚಂದಿರನ ಹುಣ್ಣಿಮೆ. ಸ್ಪರ್ಶಗೊಂಡ ಹುಣ್ಣಿಮೆಯ ರಾತ್ರಿಯಲ್ಲಿ ಸ್ವಾಮಿಗೆ ವಿಶೇಷ ಅಲಂಕಾರವನ್ನು ನೆರವೇರಿಸಿ ಧೂಪ ದೀಪ ನೈವೇದ್ಯಗಳನ್ನು ಅರ್ಪಿಸಿ, ವೇದ ಮಂತ್ರಘೋಷಗಳೊಂದಿಗೆ ಶ್ರೀ ದೇವರುಗಳನ್ನು ಗರ್ಭಗುಡಿಯಲ್ಲಿ ಪವಡಿಸುವ ಪರ್ವಕಾಲವೇ ಮಾನಸ ಪೂಜೆ.
*ತೃತೀಯ ದಿನ:- ಭೂತ ಬಲಿ*
ಈ ದಿನದ ಸೇವೆಯನ್ನು ಶ್ರೀ ಸ್ವಾಮಿಗೆ ಗೌಪ್ಯವಾಗಿ ನಡೆಸಿ ಅರ್ಪಿಸಲಾಗುತ್ತದೆ. ಭೂತ ಬಲಿ ಸೇವೆಯಲ್ಲಿ ಭಕ್ತಾದಿಗಳಿಗೆ ಪಾಲ್ಗೊಳ್ಳುವಿಕೆ ನಿಷಿದ್ಧ.
*ಚತುರ್ದಶಿ ದಿನ:- ಆರಾಟ*
ಈ ದಿನ ಬೆಳಿಗ್ಗೆ ಶ್ರೀ ದೇವರ ಉಷಾ ಕಾಲಪೂಜೆ, ಸಹಸ್ರನಾಮ ಅಭಿಷೇಕ.ವಿಶೇಷ ಹರಿವಾಣ ನೈವೇದ್ಯ ಸಮರ್ಪಿಸಿ 11.30'ಕ್ಕೆ ಮಹಾಪೂಜೆ. ಅನಂತ ದೇವರ ಬಳಿ ಹೊರಟು ಉತ್ಸವ, ಸಣ್ಣ ರಥೋತ್ಸವ, ವಸಂತ ಪೂಜೆಯಾಗಿ ಪಾಲಕಿ ಬಲಿಯಾಗಿ ಶ್ರೀ ದೇವರು ಗರ್ಭಗುಡಿಯಲ್ಲಿ ವಿರಾಜಮಾನರಾಗುತ್ತಾರೆ.
ಸಂಜೆ 7'ಕ್ಕೆ ಸರಿಯಾಗಿ ಅನಂತ ದೇವರ ಬಲಿ ಹೊರಟು ಸವಾರಿ ಬಲಿ, ಕಟ್ಟೆಪೂಜೆಯು ನಡೆದು ನಂತರ ಭದ್ರಾ ಸರಸ್ವತಿ ಸರೋವರದಲ್ಲಿ ಶ್ರೀ ದೇವರಿಗೆ ಅವಭೃತ ಸ್ನಾನ. ಜಳಕದ ಕೆರೆಯಲ್ಲಿ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆದು ಗರಿಕೆ ಮುಖೇನ ಎಳ್ಳೆಣ್ಣೆ, ಕಡಲೆ ಪುಡಿ, ಅರಶಿನವನ್ನು ಲೇಪಿಸಿ ನಂತರ ಸರೋವರದಲ್ಲಿ ದೇವರೊಂದಿಗೆ ಮಂಗಳಸ್ನಾನ ಗೈಯ್ಯುವ ಭಕಾದಿಗಳಿಗೆ ಸೌಭಾಗ್ಯವೇ ಸರಿ. ನಂತರ ಸಂಪ್ರದಾಯದಂತೆ ಶ್ರೀ ದೇವರು ಬಂದುಧ್ವಜ.ಸ್ತಂಭದ ಬಳಿ ಬಂದು ಧ್ವಜಾವರೋಹಣ.
ನಂತರ ಮಹಾಪೂಜೆಯಾಗಿ ಪದ್ಮನಾಭ ದೇವರಬಲಿ ಹೊರಟು ಉತ್ಸವ, ರಥೋತ್ಸವ, ಪಾಲಕಿ ಬಲಿ ಸೇವೆಯು ನಡೆದು ಶ್ರೀ ದೇವರು ಗರ್ಭಗುಡಿಯನ್ನು ಪ್ರವೇಶಗೈದು ಸಣ್ಣ ಕೂರ್ಮಾರತಿಯೊಂದಿಗೆ ವಾರ್ಷಿಕ ಉತ್ಸವ ಸುಸಂಪನ್ನಗೊಳ್ಳುತ್ತದೆ.
ವಿ.ಸೂ:- ಅನಾದಿ ಕಾಲದಿಂದಲೂ (ಜೋಡು ದೇವರ ಬಲಿ ಹೊರತುಪಡಿಸಿ) ಕ್ಷೇತ್ರದ ಪ್ರಾಂಗಣದಲ್ಲಿ ಎಲ್ಲಾ ಉತ್ಸವಾದಿಗಳು ನಡೆಯುವುದು ಪದ್ಮನಾಭ ದೇವರಿಗೆ ಮಾತ್ರ. ಪದ್ಮನಾಭ ದೇವರು ಕ್ಷೇತ್ರದ ಪ್ರಾಂಗಣ ಬಿಟ್ಟು ಹೊರಗೆ ಸೇವೆ ಸ್ವೀಕರಿಸುವಂತಿಲ್ಲ. ಷಷ್ಟಿ ಬ್ರಹ್ಮ ರಥೋತ್ಸವ, ಅವಭೃತ ಕಟ್ಟೆ ಪೂಜೆ ಸಹಿತ ಸವಾರಿ ಬಲಿಗಳು ಸೇವೆಗಳು ಅನಂತ ದೇವರಿಗೆ ನಡೆಯುವುದು ಕ್ಷೇತ್ರದ ಪೂರ್ವ ಪರಂಪರೆ.
ಹೀಗೆ ನಾಲ್ಕು ದಿನಗಳ ಕಾಲ ನಡೆಯುವ ಶ್ರೀ ಸ್ವಾಮಿಯ ವಾರ್ಷಿಕ ಐದನೆಯ ದಿನ 'ಜಾರಂದಾಯ ಪರಿವಾರ ದೈವ'ಗಳ ದೊಂಪದ ಬಲಿ(ಚಪ್ಪರ ಬಲಿ)ಸೇವೆಯೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳುವುದರೊಂದಿಗೆ *'ಬ್ರಹ್ಮ ಕಲಶೋತ್ಸವ'*ಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತದೆ.
ಶ್ರೀ ಸ್ವಾಮಿಯು ಬೇಡಿದನ್ನು ನೀಡುವವನು. ವಿಶೇಷವಾಗಿ ಕ್ಷೇತ್ರದಲ್ಲಿ ಸಕಲ ಸರ್ಪದೋಷಗಳಿಗೂ ಪರಿಹಾರವಿದೆ. ಆತನಿಗೆ ಪ್ರಾರ್ಥನೆಗಿಂತ ಮಿಗಿಲಾದ ಸೇವೆಯಿಲ್ಲ. ನಂಬಿಕೆಗಿಂತ ಮಿಗಿಲಾದ ಭಕಿಯಿಲ್ಲ. ಜಾತಿ ಮತ ಭೇದವೆನ್ನದೆ ತನ್ನನ್ನು ನಂಬಿ ಬರುವ ಭಕ್ತರಿಗೆ ಸಕಲ ಸನ್ಮಂಗಳವನ್ನು ಕರುಣೆಸುವ ಶ್ರೀ ಅನಂತ ಪದ್ಮನಾಭ ಸ್ವಾಮಿಗೆ ಮುಂದಿನ ಫೆಬ್ರವರಿ ತಿಂಗಳು ನಡೆಯುವ ಬ್ರಹ್ಮ ಕಲಶೋತ್ಸವದ ಮೂಲಕ ಸಂಪೂರ್ಣ ಜೀರ್ಣೋದ್ಧಾರಗೊಂಡ ಶಿಲಾಮಯ ಕ್ಷೇತ್ರದ ಅಧಿಪತಿಯಾಗಿ ಗರ್ಭಗುಡಿಯಲ್ಲಿ ವಿರಾಜಮಾನನಾಗುವ ಪರ್ವಕಾಲ ಎದಿರುಗೊಂಡಿದೆ.
ನಮ್ಮ ಹಿಂದಿನವರಿಗೆ ಈ ಪರ್ವಕಾಲವನ್ನು ನೋಡಲು ಸಿಗಲಿಲ್ಲ. ಮುಂದಿನವರಿಗೆ ಈ ಪಣ್ಯಕಾಲ ಒದಗುವುದೋ ಎಂಬುದು ದೈವೇಚ್ಛೆ.ಆದರೆ ನಮಗೆ ಪೂರ್ವ ಜನ್ಮದ ಸುಕೃತ ಫಲವೋ ಎಂಬಂತೆ 'ಶ್ರೀ ದೇವರಿಗೆ ನಡೆಯುವ ಬ್ರಹ್ಮ ಕಲಶ ಪುಣ್ಯೋತ್ಸವದ ಕಾರ್ಯಕ್ರಮದಲ್ಲಿ ಸೌಭಾಗ್ಯವನ್ನು ಕರುಣಿಸಿದ್ದಾನೆ. ಬನ್ನಿ ನಾವು ಮಾಡುತ್ತೇವೆ ಎಂಬದಕ್ಕಿಂತಲೂ ಭಗವಂತ ನಮ್ಮೊಳಗಿದ್ದು ಎಲ್ಲಾ ಸತ್ಕಾರ್ಯಗಳನ್ನು ನಮ್ಮಿಂದ ಮಾಡಿಸಿಕ್ಕೊಳ್ಳುತ್ತಾನೆಂಬ ಅಚಲ ನಂಬಿಕೆಯನ್ನಿಟ್ಟು ತ್ರಿಕರಣ ಪೂರ್ವಕವಾಗಿ ಕೈಲಾದ ಅಳಿಲು ಸೇವೆಯನ್ನು ಶ್ರೀ ಸ್ವಾಮಿಯ ಪದತಲಗಳಲ್ಲಿ ಅರ್ಪಿಸಿ ಈ ಪುಣ್ಯೋತ್ಸವದ ಕಾರ್ಯದಲ್ಲಿ ಪಾಲ್ಗೊಂಡು ಜನ್ಮಜನ್ಮಾಂತರದ ಪಾಪಗಳನ್ನು ಕಳೆದು ಪುನೀತರಾಗೋಣ. ಶ್ರೀ ದೇವರ ದಯೆಯಿಂದ ಎಲ್ಲಾ ಸತ್ಕಾರ್ಯಗಳೂ ಸಾಂಗವಾಗಿ ನೆರವೇರಲಿ.ಎಲ್ಲರಿಗೂ ಮಂಗಳವಾಗಲಿ. ಲೋಕ ಕಲ್ಯಾಣಕ್ಕೆ ನಾಂದಿ ಹಾಡಲಿ.
*'||ಭದ್ರಂ ಶಿವಂ ಸುಂದರಂ||'*
Comments
Post a Comment